ಯಂತ್ರಮೇಧಾವಿಜ್ಞಾನ -
ಯಂತ್ರ, ಪ್ರಾಣಿ ಮತ್ತು ವ್ಯವಸ್ಥಾಪನೆಗಳ ಒಳಗೆ ಮತ್ತು ನಡುವೆ ನಿಯಂತ್ರಣ ಹಾಗೂ ಸಂಪರ್ಕ ಕುರಿತ ವಿಜ್ಞಾನ (ಸೈಬರ್ನೆಟಿಕ್ಸ್).  ಸಾಧಾರಣವಾಗಿ ಈ ಪದವನ್ನು ಸ್ವಯಂಚಲಿ ನಿಯಂತ್ರಣ ಮತ್ತು ಜೀವಿ (ವಿಶೇಷವಾಗಿ ಮನುಷ್ಯರು ಮತ್ತು ಪ್ರಾಣಿಗಳು) ಇವುಗಳ ನಡುವಿನ ಅಂತರಕ್ರಿಯೆ ಕುರಿತು ಬಳಸುವುದು ವಾಡಿಕೆ.  ಈ ಬಳಕೆ ಪ್ರಾಣಿ ಸಂಕುಲಗಳಲ್ಲಿಯ ನೈಸರ್ಗಿಕ ನಿಯಂತ್ರಣ ಸಂಯಂತ್ರಗಳ (ನ್ಯಾಚುರಲ್ ಕಂಟ್ರೋಲ್ ಮೆಕ್ಯಾನಿಸಮ್ಸ್) ಅಧ್ಯಯನವನ್ನೂ ಮಾನವ ಕೃತ ನಿಯಂತ್ರಣ ವ್ಯವಸ್ಥೆಗಳ ಪರಿಕರ್ಮಿಗಳಾಗಿ (ಆಪರೇಟರ್ಸ್) ಮಾನವ ವರ್ತನೆಯ ಅಧ್ಯಯನವನ್ನು ಒಳಗೊಂಡಿದೆ.  ಹೀಗೆ ಇದೊಂದು ಅಂತರಶಾಸ್ತ್ರೀಯ ವಿಜ್ಞಾನ ಪ್ರಕಾರ, ಸರ್ವೋಸಂಯಂತ್ರ (ಸರ್ವೋಮೆಕ್ಯಾನಿಸಮ್ - ನಿಮ್ನಶಕ್ತಿ ಸಂಜ್ಞೆಯ ಮೂಲಕ ದ್ರವಚಾಲಿತ, ವಾಯುಚಾಲಿತ ಅಥವಾ ಇತರ ಬಗೆಯ ನಿಯಂತ್ರಣ ಸಂಯಂತ್ರವನ್ನು ಚಾಲೂಗೊಳಿಸುವ ಮತ್ತು ನಿಯಂತ್ರಿಸುವ ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆ) ಮತ್ತು ವ್ಯವಸ್ಥಾ ಎಂಜಿನಿಯರ್ (ಸಿಸ್ಟಮ್ಸ್ ಎಂಜಿನಿಯರ್) ಹಾಗೂ ಸಂಪರ್ಕ ಎಂಜಿನಿಯರ್ (ಕಮ್ಯೂನಿಕೇಶನ್ಸ್ ಎಂಜಿನಿಯರ್) ಮಾಡುವ ಕೆಲಸವನ್ನು ಶರೀರ ವಿಜ್ಞಾನಿ, ನರವಿಜ್ಞಾನಿ, ಮನೋವಿಜ್ಞಾನಿ, ಸಮಾಜ ವಿಜ್ಞಾನಿ ಹಾಗೂ ಅರ್ಥಶಾಸ್ತ್ರಜ್ಞ ಮಾಡುವ ಕೆಲಸದ ಕೆಲವು ಅಂಶಗಳನ್ನೂ ಇದು ಸಮಾವೇಶಗೊಳಿಸಿ ಏಕೀಕರಿಸುತ್ತದೆ.

ಈ ಎಲ್ಲ ಕ್ರಿಯೆಗಳನ್ನೂ ಯಂತ್ರಮೇಧಾವಿಜ್ಞಾನದ ಪರಿಧಿಯೊಳಗೆ ಹೊಂದಿಸುವಂಥ ಹಲವಾರು  ಸಾಮಾನ್ಯ ಅಂಶಗಳಿವೆ.  ಒಂದೆಂದರೆ ಮರುರವಾನೆ (ಫೀಡ್ ಬ್ಯಾಕ್) ವಿಧಿ ಮತ್ತು ನಿಯಂತ್ರಣ ಕುರಿತ ಎಲ್ಲ ಸಮಸ್ಯೆಗಳಿಗೂ ಇದು ಸಾಮಾನ್ಯವಾದದ್ದು.  ಇಂಥ ಸಮಸ್ಯೆಗಳನ್ನು ಮನೋವಿಜ್ಞಾನಿಗಳು ಉದ್ದೇಶ ನಿರ್ದೇಶಿತಕ್ರಿಯೆ ಎನ್ನುತ್ತಾರೆ.  ಉದಾಹರಣೆಗೆ ನಿರ್ದಿಷ್ಟ ಲಕ್ಷ್ಯದತ್ತ ಗುರಿ ಹಿಡಿವ ತುಪಾಕಿ, ಪುಸ್ತಕ ಹಿಡಿಯಲು ಚಾಚುವ ಕೈ ಅಥವಾ ಸಾಮಗ್ರಿಯ ಮಾರಾಟ ಬೆಲೆ ನಿಗದಿಮಾಡುವ ತಂತ್ರ.  ಇನ್ನೊಂದು ಮುಖ್ಯ ಸಂಗತಿ ಎಂದರೆ ಹೆಚ್ಚಿನ ಇತರ ಎಲ್ಲ ವಿಜ್ಞಾನಿಗಳಿಗಿಂತ ಯಂತ್ರ ಮೇಧಾವಿಜ್ಞಾನ ಭಿನ್ನವಾದದ್ದು.  ಈ ಕ್ರಿಯೆಯಲ್ಲಿ ಜರುಗುವ ಶಕ್ತಿವರ್ಗಾವಣೆಯ ಪ್ರಭಾವ ಅತ್ಯಲ್ಪ, ಇಲ್ಲಿ ಮಾಹಿತಿಯ ವರ್ಗಾವಣೆಯೇ ಅತಿ ಮುಖ್ಯವಾದದ್ದು.

ಇತಿಹಾಸ : ಸೈಬರ್ನೆಟಿಕ್ಸ್ ಎಂಬ ಪದವನ್ನು ಮೂಲ ಗ್ರೀಕ್ ಪದವೊಂದರಿಂದ ರೂಪಿಸಲಾಗಿದೆ.  ಅಲ್ಲಿ ಇದರ ಅರ್ಥ ಚುಕ್ಕಾಣಿಗಾರ (ಅಂಬಿಗ) ಅಥವಾ ನಿಯಂತ್ರಕ.  ಸಂಪರ್ಕ ಮತ್ತು ನಿಯಂತ್ರಣ (ಕಮ್ಯೂನಿಕೇಶನ್ ಅಂಡ್ ಕಂಟ್ರೋಲ್) ಕುರಿತ ಸಮಸ್ಯೆಗಳು ಎಲ್ಲೆಲ್ಲಿ ಉದ್ಭವಿಸುತ್ತಿದ್ದುವೂ ಅಲ್ಲೆಲ್ಲ ಅವುಗಳ ನಡುವೆ ವಿಶಿಷ್ಟವಾದ ಒಂದು ಏಕತೆಯನ್ನು 1947ರ ಮೊದಲೇ ಗುರುತಿಸಲಾಗಿತ್ತು.  ಹೀಗೆ ಗುರುತಿಸಿದವರಲ್ಲಿ ಪ್ರಮುಖರು ನಾರ್ಬರ್ಟ್ ವೀನರ್ ಮತ್ತು ಅರ್ಟುರೂ ರೋಸೆನ್ ಬ್ಲೂಯತ್.  ಆದರೆ ಈ ಏಕತೆಯ ಅರಿವು ಮೂಡುವ ದಿಶೆಯಲ್ಲಿ ಎದುರಾದ ದೊಡ್ಡ ಅಡಚಣೆ ಎಂದರೆ ಪಾರಿಭಾಷಿಕ ಪದಗಳ ನಡುವೆ ಸಾಮರಸ್ಯವಿಲ್ಲದ್ದು. ಒಂದೇ ಕ್ರಿಯೆ ಕುರಿತಂತೆ ಒಂದೊಂದು ಶಿಸ್ತಿನವರು ಒಂದೊಂದು ಪಾರಿಭಾಷಿಕ ಪದವನ್ನು ಟಂಕಿಸಿ ಬಳಸುತ್ತಿದ್ದರು.  ಇಂಥ ಬಹು ಭಾಷಾ ಸಂತೆಯಲ್ಲಿ ಸಂವಹನತೆ ಏರ್ಪಡುವುದೂ ಹೇಗೆ? ಇದರ ಪರಿಹಾರಾರ್ಥ 1942 ಮೇ ತಿಂಗಳಲ್ಲಿ ಸೇರಿದ ಮ್ಯಾಸಿ ಪೌಂಡೇಶನ್ ಕಾನ್ಫರೆನ್ಸಿನಲ್ಲಿ (ಅಮೆರಿಕ) ಯಂತ್ರಮೇಧಾವಿಜ್ಞಾನಿ-ನಿಯಂತ್ರಣಜ್ಞ, ಹೃದಯ ತಜ್ಞ-ರೇಚಕಯಂತ್ರ ಪರಿಣಿತ-ಹೀಗೆ ಮೇಲುನೋಟಕ್ಕೆ ಸಂಬಂಧವಿರದ ಆದರೆ ಕ್ರಿಯೆಯ ದೃಷ್ಟಿಯಿಂದ ಸಾಮಾನ್ಯತೆ ಇರುವ ಪರಿಣಿತರ ಸಮ್ಮೇಳನವದು.  ಇಲ್ಲಿಂದ ಮುಂದಕ್ಕೆ ಯಂತ್ರಮೇಧಾವಿಜ್ಞಾನ ಒಂದು ಅಂತರಶಾಸ್ತ್ರೀಯ ವಿಜ್ಞಾನ ಪ್ರಕಾರವಾಗಿ ಪ್ರವರ್ಧಿಸಿತು.

	ಜೀವಿಗಳಲ್ಲಿ ನಿಯಂತ್ರಣ ಪರಿಪಥಗಳು (ಕಂಟ್ರೋಲ್ ಲೂಪ್ಸ): ಸಿಸ್ಟಮ್ಸ್ ಎಂಜಿನಿಯರಿಂಗಿನ ಪರಿಕಲ್ಪನೆಗಳನ್ನು ಶರೀರವಿಜ್ಞಾನಿಯೂ ನರವಿಜ್ಞಾನಿಯೂ ಸಮಾವೇಶಗೊಳಿಸಿದುದರ ಫಲವಾಗಿ ಜೀವಿಗಳಲ್ಲಿ ನಡೆಯುವ ಪ್ರಕ್ರಿಯೆಗಳ ಬಗೆಗಿನ ತಿಳಿವಳಿಕೆ ಗಮನಾರ್ಹವಾಗಿ ವರ್ಧಿಸಿದೆ.  ಪ್ರಾಯಶಃ ಇದಕ್ಕೆ ದೊರೆಯುವ ಮೊತ್ತಮೊದಲ ಉದಾಹರಣೆ ಎಂದರೆ  1946ರಲ್ಲಿ ವೀನರ್ ಮತ್ತು ರೋಸೆನ್ ಬ್ಲೂಯತ್ ಮಾಡಿದ ಕೆಲಸ.  ಅವರು ಕ್ಲೋನಸ್ ವಿದ್ಯಮಾನವನ್ನು ಅಭ್ಯಸಿಸಿದರು.  ಕ್ಲೋನಸ್ ಎಂದರೆ ಹೆಚ್ಚು ಕಡಿಮೆ ತನ್ನ ಸಾಮಥ್ರ್ಯದ ಮಿತಿವರೆಗೆ ಭಾರ ಹೇರಲ್ಪಟ್ಟ ಮಾಂಸಖಂಡ ನಿಯತಕಾಲಿಕವಾಗಿ ಸಂಕೋಚಿಸುವ ಮತ್ತು ವ್ಯಾಕೋಚಿಸುವ ಕ್ರಿಯೆ.  ನರಸಂಬಂಧ ವ್ಯಾಧಿಗಳಿರುವಾಗ ಮಾಂಸಖಂಡದ ಮೇಲೆ ಭಾರ ಹೇರದಿದ್ದಾಗಲೂ ಅದರಲ್ಲಿ ಈ ಕ್ರಿಯೆ ಕಂಡುಬರುವುದುಂಟು.  ಅವರು ಬೆಕ್ಕುಗಳ ಮೇಲೆ ತಮ್ಮ ಸಂಶೋಧನೆ ಮಾಡಿದರು.  ಭಾರ ಹೇರಲ್ಪಟ್ಟ ಮಾಂಸಖಂಡದಲ್ಲಿ ಅವೇಗಗಳ ಸಂಚರಣೆ (ಟ್ರಾನ್ಸಮಿಶನ್ ಆಫ್ ಇಂಪಲ್ಸಸ್) ನರಘಟಕಗಳ ಮೂಲಕವೂ ಮಾಂಸಖಂಡ ಘಟಕಗಳ ಮೂಲಕವೂ ಹೇಗಾಗುವುದೆಂಬುದನ್ನು ಅಳೆದರು.  ಈ ಘಟಕಗಳು ಸಂವೃತಪರಿಪಥೆ ವ್ಯವಸ್ಥೆಯನ್ನು (ಕ್ಲೋಸ್ಟ-ಲೂಪ್ ಸಿಸ್ಟಮ್) ರೂಪಿಸಿದ್ದುವು ಇದೇ ವ್ಯವಸ್ಥೆಯ ವಿವೃತಪರಿಪಥ (ಓಪನ್-ಲೂಪ್) ವರ್ಗಾವಣೆ ಲಕ್ಷಣಗಳು ತಿಳಿದಿದ್ದುದರಿಂದ ಶಿಷ್ಟ ಮರುರವಾನೆ ಸಂಬಂಧಗಳನ್ನು (ಸ್ಟ್ಯಾಂಡರ್ಡ ಫೀಡ್ ಬ್ಯಾಕ್ ರಿಲೇಶನ್ಸ) ಬಳಸಿಕೊಂಡು ಸಂವೃತ ಪರಿಪಥ ವ್ಯವಸ್ಥೆಯ ಆಂದೋಲನಗಳ ಆವರ್ತಾಂಕವನ್ನು ಮುನ್ನುಡಿಯಬಲ್ಲವರಾಗಿದ್ದರು.  ಈ ಗಣನೆಗಳು ಸಾಕಷ್ಟು ನಿಖರವಾಗಿಯೂ ಇದ್ದು ಅವರಿಗೆ ತಮ್ಮ ವಿಧಾನದಲ್ಲಿ ಭರವಸೆ ಮೂಡಿಸಲು ಕಾರಣವಾದುವು.

	ಅಂದಿನಿಂದೀಚೆಗೆ ಜೀವಂತ ಊತಕಗಳಲ್ಲಿಯ ಹಲವಾರು ಪ್ರಕ್ರಿಯೆಗಳನ್ನು ಸಿಸ್ಟಮ್ಸ್ ಎಂಜಿನಿಯರನಿಗೆ ಅರ್ಥವಾಗುವ ಪರಿಭಾಷೆಯಲ್ಲಿ ವಿವರಿಸಲಾಗಿದೆ.  ಕೇಂದ್ರ ನರವ್ಯವಸ್ಥೆಯ ಕೆಲವೊಂದು ಪ್ರಕ್ರಿಯೆಗಳನ್ನು ಕುರಿತಂತೆ ಅದನ್ನು ಒಂದು ಸ್ವಿಚ್ಚಿಂಗ್ ಜಾಲ (ಸ್ವಿಚ್ಚಿಂಗ್ ನೆಟ್‍ವರ್ಕ್) ಎಂದು ಪರಿಗಣಿಸಬಹುದು.  ನ್ಯೂರಾನುಗಳು ಅಥವಾ ನರಕೋಶಗಳು ಇದರಲ್ಲಿಯ ಸ್ವಚ್ಚಿಂಗ್ ಘಟಕಗಳು.  ಈ ಘಟಕಗಳ ತಾರ್ಕಿಕ ಸಂಘಟನೆಯನ್ನು ಸೂತ್ರ ಯುಗ್ಮನಗಳು (ಸಿನೇಪ್ಸ್-ನ್ಯೂರಾನುಗಳ ನಡುವಿನ ಸಂಧಿ ಬಿಂದುವಿನ ಗುಣಗಳು)  ವ್ಯಾಖ್ಯಿಸುತ್ತವೆ.
 
      ಪ್ರತಿಯೊಂದು ನ್ಯೂರಾನಿನ ನಿರ್ಗಮವೂ (ಔಟ್ ಪುಟ್) ಸ್ವಭಾವತಃ ದ್ವಿಮಾನಕವಾಗಿದೆ (ಬೈನರಿ)-ಒಂದೋ ಅದು ವಿಶ್ರಾಂತಿಯಲ್ಲಿದೆ ಇಲ್ಲವೇ ಘಾತಿಸುತ್ತದೆ.  ಯಾವುದೇ ಕ್ಷಣದಲ್ಲಿ ಅದರ ನಿರ್ಗಮ ತಾರ್ಕಿಕವಾಗಿ ಹೇಳುವುದಾದರೆ ಅದರ ಪೂರ್ವಸ್ಥಿತಿಯ ಮೇಲೂ ಅಭಿವಾಹೀ ನ್ಯೂರಾನುಗಳ (ಅಫರೆಂಟ್ ನ್ಯೂರಾನ್ಸ್) ಸ್ಥಿತಿಯ ಮೇಲೂ ಅವಲಂಬನೆಗೊಂಡಿದೆ. ದತ್ತನ್ಯೂರಾನಿನ ಮೇಲೆ ಪ್ರಭಾವ ಬೀರಬಲ್ಲ ನಿರ್ಗಮಗಳನ್ನು ನೀಡುವ ನ್ಯೂರಾನುಗಳಿಗೆ ಅಭಿವಾಹೀ ನ್ಯೂರಾನುಗಳೆಂದು ಹೆಸರು. ಪರಿಗಣನೆಯಲ್ಲಿರುವ ಒಂದು ಸಂವೃತ ಮರುರವಾನೆ (ಉದಾಹರಣೆಗೆ ಕ್ಲೋನಸ್‍ನಂಥ ವಿದ್ಯಮಾನ-ಮಾಂಸಖಂಡಗಳ ಒಂದು ಗುಂಪಿನಲ್ಲಿ ಕಂಡಬರುವ ಹಿಗ್ಗುಕುಗ್ಗು ಚಲನೆಗಳ ಪುಂಖಾನುಪುಂಖ ತೀವ್ರಗತಿ) ಸಾಧಾರಣವಾಗಿ ಈ ಮುಂದಿನವನ್ನು ಒಳಗೊಂಡಿರುತ್ತದೆ: ಎಫೆಕ್ಸಲ್ ನ್ಯೂರಾನುಗಳು, ಮಾಂಸಖಂಡ ಊತಕ,  ಬಾಹ್ಯಪರಿಸರ, ಸಂವೇದಕ, ನ್ಯೂರಾನುಗಳು ಮತ್ತು ಸೂತ್ರ ಯುಗ್ಮನಗಳು. ಆದರೆ ಪೂರ್ತಿಯಾಗಿ ಕೇಂದ್ರೀಯ ನರವ್ಯವಸ್ಥೆಯ ಒಳಗೆ ಸೂತ್ರ ಯುಗ್ಮನಗಳು ಒಂದು ಸಂವೃತ ಪರಿಪಥವನ್ನು ರೂಪಿಸಬಹುದು.  ಆಗ ಬಹುಕಂಪನಕಾರಿ ಮಂಡಲದಲ್ಲಿರುವಂತೆ (ಮಲ್ಟಿ ವೈಬ್ರೇಟರ್ ಸಕ್ರ್ಯೂಟ್) ಆಂದೋಲನದ ಸ್ತಿಮಿತಸ್ಥಿತಿ ನಿರ್ಬಂಧವಿರುವ ನ್ಯೂರಾನ್ ಪರಿಪಥಗಳು ಇರುವುದು ಸಾಧ್ಯ. ಇಂಥ ಪರಿಪಥಗಳ ಅಸ್ತಿತ್ವವಿರುವುದರ ಬಗ್ಗೆ ಪ್ರಾಯೋಗಿಕ ಸಮರ್ಥನೆ ದೊರೆತಿವೆ ಪ್ರಾಯಶಃ ಚರ ಆವರ್ತಾಂಕಸಹಿತ ಈ ಸ್ವಯಂಪೋಷಿತ ಆಂದೋಲನಗಳನ್ನು ಹ್ರಸ್ವಾವಧಿ ಜ್ಞಾಪಕಸಾಮಥ್ರ್ಯವನ್ನು ಒಳಗೊಂಡಂತೆ ಅನೇಕ ಬಗೆಯ ವಿದ್ಯಮಾನಗಳಿಗೆ ಹೊಂದುವ ಸಂಯತ್ರಗಳೆಂದು (ಮೆಕಾನಿಸಮ್ಸ್) ಸೂತ್ರೀಕರಿಸಲಾಗಿದೆ.
 
 	 ಗಣಕಯಂತ್ರವನ್ನು ಮಾನವ ಮಿದುಳಿನ ವಿಸ್ತರಣೆ ಎನ್ನುವುದುಂಟು. ಈ ಯಂತ್ರದ ಸಾಧ್ಯತೆಯನ್ನು ಆಗಗೊಳಿಸುವಲ್ಲಿ ಯಂತ್ರಮೇಧಾವಿಜ್ಞಾನದ ಪಾತ್ರ ಬಲು ಹಿರಿದಾಗಿದೆ.
                                                                     (ಆರ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ